ಪೈಷ್, ಡೂಮಿಂಗೂಷ್ -
ಪೋರ್ಚುಗೀಸ್ ಪ್ರವಾಸಿ. ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಬರೆಯಲು ಸಹಾಯಕವಾಗಿರುವ ದಾಖಲೆಗಳ ಪೈಕಿ ಇವನ ಪ್ರವಾಸ ಗ್ರಂಥ ಮುಖ್ಯವಾದ್ದು. ಪೋರ್ಚುಗೀಸ್ ಭಾಷೆಯಲ್ಲಿದ್ದ ಈ ಗ್ರಂಥವನ್ನು ರಾಬರ್ಟ್ ಸ್ಯೂಯೆಲ್ ಎಂಬ ಆಂಗ್ಲ ಇತಿಹಾಸಕಾರ ಇಂಗ್ಲೀಷಿಗೆ ಭಾಷಾಂತರ ಮಾಡಿ ತನ್ನ ಫರ್ಗಾಟನ್ ಎಂಪೈರ್ ಎಂಬ ಗ್ರಂಥದಲ್ಲಿ ಕೊಟ್ಟಿದ್ದಾನೆ. ಪೈಷ್ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ 1520 ರಲ್ಲಿ ವಿಜಯನಗರಕ್ಕೆ ಬಂದಿದ್ದ. ಅದು ವಿಜಯನಗರದ ವೈಭವದ ಕಾಲವಾಗಿತ್ತು. ಪೈಷ್ ಕುದುರೆ ವ್ಯಾಪಾರಿಯಾಗಿದ್ದು, ಮೂರು ವರ್ಷಗಳ ಕಾಲ ವಿಜಯನಗರದಲ್ಲಿದ್ದ. ಕೃಷ್ಣದೇವರಾಯನನ್ನು ಪೈಷ್ ಹಲವಾರು ಸಲ ಕಂಡು ಅವನ ವ್ಯಕ್ತಿತ್ವ, ವೈಭವದ ಆಳ್ವಿಕೆ ಮತ್ತು ಅವನ ಕಾಲದ ಸಂಪ್ರದಾಯ ಮತ್ತು ರೂಢಿಗಳ ಬಗ್ಗೆ ಬರೆದಿದ್ದಾನೆ.

ಪೈಷ್ ಬರೆದ ಗ್ರಂಥದ ಪ್ರತಿಗಳನ್ನು ಗೋವೆಯಿಂದ ಒಬ್ಬ ಪೋರ್ಚುಗಲ್ಲಿನ ರಾಜಧಾನಿಯಾದ ಲಿಸ್ಬನ್ ನಗರದಲ್ಲಿದ್ದ ಚರಿತ್ರಕಾರ ಬರೂಷನಿಗೆ ಕಳುಹಿಸಿದನೆಂದು ಹೇಳಲಾಗಿದೆ. ಬರೂಷ್ ಲಿಸ್ಬನ್ನಿನ ಇಂಡಿಯ ಕಚೇರಿಯಲ್ಲಿ ಒಂದು ಹುದ್ದೆಯಲ್ಲಿದ್ದ. ಅವನು ಪೈಷ್ ಬರೆದ ವಿಷಯಗಳನ್ನು ತನ್ನ ಚರಿತ್ರೆಯಲ್ಲಿ ಅಳವಡಿಸಿಕೊಂಡ. ಆದರೆ ಮೂಲದಲ್ಲಿ ಕಂಡುಬರುವ ಸ್ವಾರಸ್ಯವೆಲ್ಲ ಅವನ ಚರಿತ್ರೆಯ ಗ್ರಂಥದಲ್ಲಿ ಮಾಯವಾಗಿ ಅದು ಹೆಚ್ಚಿನ ಮಟ್ಟಿಗೆ ಸಪ್ಪೆಯಾಗಿ ಪರಿಣಮಿಸಿತು. ಪೈಷ್‍ನ ಪೋರ್ಚುಗೀಸ್ ಭಾಷೆಯ ಮೂಲಗ್ರಂಥಗಳನ್ನು ಅರಬ್ಬೀ ವಿದ್ವಾಂಸ ಡೇವಿಡ್ ಲೋಪ್ 1897 ರಲ್ಲಿ ಪ್ರಕಟಿಸಿದ. 

ಪೈಷನ ಗ್ರಂಥ ಅನೇಕ ದೃಷ್ಟಿಗಳಿಂದ ಬಹಳ ಪ್ರಮುಖವಾದ್ದು. ವಿಜಯನಗರ ರಾಜಧಾನಿಯ ವರ್ಣನೆ, ಅದರ ಉತ್ಪನ್ನಗಳ ವಿವರ, ಆ ಸಾಮ್ರಾಜ್ಯದಲ್ಲಿ ಜಾರಿಯಲ್ಲಿದ್ದ ಪದ್ಧತಿಗಳು, ಸಂಪ್ರದಾಯಗಳು ಎಲ್ಲವನ್ನೂ ಪೈಷ್ ನೀಡಿದ್ದಾನೆ. ಈ ಬಗೆಯ ಇತರ ಎಲ್ಲ ಗ್ರಂಥಗಳನ್ನೂ ಇದು ಮೀರಿಸುತ್ತದೆ; ವಿಜಯನಗರ ಸಾಮ್ರಾಜ್ಯದ ಸ್ಥಿತಿಗತಿಗಳನ್ನು ಅರಿಯಲು ಬಹು ಸಹಾಯಕವಾಗಿದೆ. 

ಪೈಷ್ ಕೃಷ್ಣದೇವರಾಯನ ಸಾಮ್ರಾಜ್ಯದ ವೈಭವವನ್ನು ದಾರಾಳವಾಗಿ ಹೊಗಳಿದ್ದಾನೆ. ಕೃಷ್ಣದೇವರಾಯ ಅತ್ಯಂತ ಗೌರವಾನ್ವಿತನಾದ ಹಾಗೂ ಪರಿಪೂರ್ಣನಾದ ದೊರೆ ಎಂದು ಪೈಷ್ ಹೇಳಿದ್ದಾನಲ್ಲದೆ, ಇವನು ಮಹಾನ್ ಆಡಳಿತಗಾರ ನ್ಯಾಯಪರ ಎಂದಿದ್ದಾನೆ. ರಾಜಧಾನಿ ವಿಜಯನಗರ ರೋಮಿನಷ್ಟು ದೊಡ್ಡದಾಗಿತ್ತೆಂದು ಇವನು ಹೇಳಿದ್ದಾನೆ ಪ್ರಪಂಚದಲ್ಲೇ ಇದು ಅತ್ಯಂತ ಸುವ್ಯವಸ್ಥಿತ ನಗರವಾಗಿ ಎಲ್ಲ ಸೌಲಭ್ಯ ಇವನಿಗೆ ಕಂಡಿತ್ತು. ಅರಮನೆಯ ವರ್ಣನೆಗಳ ಜೊತೆಗೆ ದಸರಾ ಹಬ್ಬದ ಸಂಭ್ರಮ, ದೇವರುಗಳ ರಥೋತ್ಸವಗಳು ಮತ್ತು ಅಲ್ಲಿಯ ದೇವಾಲಯಗಳನ್ನು ವರ್ಣಿಸಿದ್ದಾನೆ. ಅಂದಿನ ಕೃಷಿ ಪದ್ಧತಿ, ಆಹಾರ ಬೆಳೆಗಳು ಜನರ ನಡೆನುಡಿ ಆಚಾರ ವಿಚಾರ ಎಲ್ಲವೂ ಪೈಷ್‍ನ ಗ್ರಂಥದಲ್ಲಿದೆ. ವಿಜಯನಗರದಲ್ಲಿ ವಜ್ರ ವೈಡೂರ್ಯಗಳೂ ಮತ್ತು ಮುತ್ತು ಮಾಣಿಕ್ಯಗಳೂ ವಿವಿಧ ಬಟ್ಟೆ ಬರೆಗಳೂ ಒಟ್ಟಿನಲ್ಲಿ ಈ ಭೂಮಿಯ ಮೇಲೆ ಇರುವುದೆಲ್ಲವೂ ನಮಗೆ ಬೇಕಾದುದೆಲ್ಲವೂ ಸಿಗುತ್ತಿದ್ದುವೆಂದು ಪೈಷ್ ಬರೆದಿದ್ದಾನೆ. ಕೃಷ್ಣದೇವರಾಯನ ದಿನಚರಿಯನ್ನು ವಿವರವಾಗಿ ನೀಡಿದ್ದಾನೆ. ಸೈನ್ಯಾಡಳಿತವನ್ನೂ ವಿವರಿಸಿದ್ದಾನೆ. ಸಮಾಜದಲ್ಲಿ ಸ್ತ್ರೀಯರ ಪಾತ್ರ, ವೃತ್ಯ ಮುಂತಾದ ಲಲಿತಕಲೆಗಳೂ ಮೊದಲಾದುವನ್ನು ಪೈಷ್ ಮರೆತಿಲ್ಲ. ಜನರ ಸಾಮಾಜಿಕ ಆರ್ಥಿಕ ಸ್ಥಿತಿಗಳ ವಿವರಣೆ ಇದೆ.
(ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ